ಡೂ ಮಾರೀಯೆ, ಜಾರ್ಜ್ ಲ್ಯೂಯಿಸ್ ಪ್ಯಾಲ್‍ಮೆಲಾ ಬೂಸನ್
1834-1896. ಇಂಗ್ಲಿಷ್ ಕಾದಂಬರಿಕಾರ, ಕಲೆಗಾರ. ಹುಟ್ಟಿದ್ದು ಪ್ಯಾರಿಸ್‍ನಲ್ಲಿ. ತಂದೆ ಫ್ರೆಂಚ್ ಮನೆತನಕ್ಕೆ ಸೇರಿದ್ದು ತಾಯಿ ಇಂಗ್ಲಿಷ್‍ನವರಾಗಿದ್ದರಿಂದ ಈತನಿಗೆ ಎರಡೂ ಭಾಷೆಗಳ ಪರಿಚಯವಿತ್ತು. ಕೆಲವು ಕಾಲ ಈತ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರವನ್ನು ಅಭ್ಯಾಸ ಮಾಡಿದ. ತಂದೆಯ ಮರಣಾನಂತರ (1856) ಪ್ಯಾರಿಸ್ಸಿನಲ್ಲಿ ಕಲಾಭ್ಯಾಸ ಮಾಡಿದ. 1859ರಲ್ಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಈತ 1860ರಿಂದ ಹ್ಯಾಂಪ್‍ಸ್ಟೆಡ್‍ನಲ್ಲಿ ವಾಸಿಸತೊಡಗಿ ಪಂಚ್ ಪತ್ರಿಕೆಗೆ ಚಿತ್ರಗಳನ್ನು ಬರೆಯುತ್ತಿದ್ದ. ಪ್ರಸಿದ್ಧ ಕಾದಂಬರಿಕಾರ್ತಿ ಡ್ಯಾಫ್ನಿ ಡೂ ಮಾರೀಯೆ ಈತನ ಮೊಮ್ಮಗಳು.

ಈತನ ಕಾದಂಬರಿಗಳಾದ ಪೀಟರ್ ಇಬಿಟ್ಸನ್ (1891), ದಿ ಮಾರ್ಷಿಯನ್ (1897)- ಇವು ಈತನ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನವನ್ನು ವರ್ಣಿಸುತ್ತವೆ. ಟ್ರಿಲ್ಬಿ (1894) ಯಶಸ್ವೀ ಕಾದಂಬರಿ; ಈತನ ಪ್ಯಾರಿಸ್ ಅನುಭವಗಳನ್ನು ಚಿತ್ರಿಸುತ್ತದೆ. 
										(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ